ಬೇರಿಂಗ್, ಎಮಿಲ್ ಫಾನ್
1854-1917. ಜರ್ಮನಿಯ ಏಕಾಣು ಜೀವಿ ವಿಜ್ಞಾನಿ. ಜನನ 3-3-1854, ಮರಣ 31-3-1917. ಪಶ್ಚಿಮ ಪ್ರಶ್ಯದಲ್ಲಿ ಜನಿಸಿ ಬರ್ಲಿನ್ನಿನಲ್ಲಿ ವೈದ್ಯ ವಿದ್ಯಾಭ್ಯಾಸ ಮಾಡಿ, ಸೈನ್ಯದ ವೈದ್ಯವಿಭಾಗದಲ್ಲಿ ನೇಮಕಗೊಂಡ. 35ನೇ ವಯಸ್ಸಿಗೆ ರಾಬರ್ಟ್ ಕಾಖ್(1843-1910) ಎಂಬ ಪ್ರಸಿದ್ಧ ಜರ್ಮನ್ ಏಕಾಣುಜೀವಿ ವಿಜ್ಞಾನಿಯ ಸಹೋದ್ಯೋಗಿಯಾಗಿ ಸೇರಿ ಸೋಂಕುರೋಗಗಳನ್ನು ಕುರಿತು ವಿಶೇಷ ಅಧ್ಯಯನ ನಡೆಸಿದ. 1890ರಲ್ಲಿ ಬೇರಿಂಗ್ ಜಪಾನಿನ ಸಂಶೋಧಕರಾದ ಶಿಬಸಾಬ್ಯುರೋ ಕಿಟಸಾಟೋ ಜೊತೆ ಕಾಖ್ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದಾಗ, ಧನುರ್ವಾಯುವಿನಿಂದ ನರಳುತ್ತಿದ್ದ ಪ್ರಾಣಿಯ ಲಸಿಕೆಯನ್ನು ಆರೋಗ್ಯವಂತ ಪ್ರಾಣಿಗಳಲ್ಲಿ ಧನುರ್ವಾಯು ವಿರೋಧ ರಕ್ಷಣೆ ಉಂಟುಮಾಡಬಹುದು ಎಂಬುದನ್ನು ತೋರಿಸಿದ. ಈ ರೀತಿ ಸೋಂಕುವಿರುದ್ಧ ರಕ್ಷಣೆ ಧನುರ್ವಾಯುವಿನ ರೋಗದಲ್ಲಿ ಸೋಂಕಿನ ಮಾರಕ ಪ್ರಮಾಣಕ್ಕಿಂತ ಮುನ್ನೂರರಷ್ಟು ಹೆಚ್ಚು ಪ್ರಮಾಣದ ಸೋಂಕಿಗೂ ವಿರೋಧವಾಗಿ ಕೆಲಸ ಮಾಡುವಷ್ಟು ಪ್ರಭಾವಿಯಾಗಿತ್ತು. ಬೇರಿಂಗ್ ಮತ್ತು ಕಿಟಸಾಟೋ ಇಬ್ಬರೂ ಸೇರಿ ವಿಷರೋಧಕ ಎಂಬ ಒಂದು ಪ್ರಯೋಗವಸ್ತುವನ್ನು ತಯಾರು ಮಾಡಿದರು. ಇದೇ ರೀತಿ ಆರೋಗ್ಯವಂತ ಗಂಟಲುಮಾರಿ ಬೇನೆ ಕ್ರಿಮಿಗಳನ್ನು ಸ್ನಾಯುಗಳ ಮೂಲಕ ಚುಚ್ಚಿ ಶರೀರಕ್ಕೆ ಸೇರಿಸಿ ಕೆಲ ಕಾಲನಂತರ ಆ ಪ್ರಾಣಿಗಳ ಲಸಿಕೆಯನ್ನು ಗಂಟಲುಮಾರಿಬೇನೆ ಬಂದವರಿಗೆ ಚುಚ್ಚಿದರೆ ಅದು ಗುಣವಾಗುತ್ತದೆ ಎಂಬುದನ್ನೂ ಬೇರಿಂಗ್ ತೋರಿಸಿದ. ಲೂಯಿ ಪಾಸ್ತರನ ಊಹೆಯಂತೆ ಬಲಗುಂದಿದ ವಿಷಕಣಗಳನ್ನು ವಿಷರೋಧಕಜನಕಗಳಾಗಿ ಉಪಯೋಗಿಸಬಹುದೆಂದೂ ಸಾಧಿಸಿದ. ಈ ರೀತಿಯಾದ ಅನೇಕ ಘಟನೆಗಳಿಂದ ಕೂಡಿದ ಚರಿತ್ರಾರ್ಹ ಸಂಶೋಧನೆಗಳು ಪ್ರಾಯೋಗಿಕವಾಗಿ ಸಾಧ್ಯವೆಂದು ಸ್ಥಿರೀಕರಿಸಿದ. ದುರ್ಬಲ ವಿಷಾಣುಗಳಿಂದ ವ್ಯಾಧಿ ತಲೆದೋರುವುದಾದರೂ ಅದು ಸೌಮ್ಯವಾಗಿಯೇ ಇದ್ದು ವಾಸಿ ಆಗಿ ಮರುಸೋಂಕಿನ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ ಎಂಬುದು ಪ್ರಕಟವಾಯಿತು. ಗಂಟಲು ಮಾರಿಬೇನೆ ವಿಷರೋಧಕ 1892ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಯಿತು. ಸ್ವಲ್ಪ ವರ್ಷಗಳಲ್ಲಿಯೇ ಇದರ ಉಪಯೋಗ ವ್ಯಾಪಕವಾಯಿತು. ಇದಕ್ಕೋಸ್ಕರವಾಗಿ ಬೇರಿಂಗನಿಗೆ ಫ್ರಾನ್ಸಿನಿಂದ ಬಹುಮಾನ ಬಂದಿತು.

	1894ರಲ್ಲಿ ಬೇರಿಂಗ್ ಹಲ್ಲೆ ಎಂಬಲ್ಲಿಯೂ 1895ರಲ್ಲಿ ಮಾರಬರ್ಗ್ ಎಂಬಲ್ಲಿಯೂ ಪ್ರಾಧ್ಯಾಪಕನಾಗಿ ನೇಮಕಗೊಂಡ. ಆದರೆ ಅನಾರೋಗ್ಯದಿಂದಾಗಿ ಇವನು ಪಾಠಮಾಡಲಾಗದೆ ಆರೋಗ್ಯ ವಿಜ್ಞಾನದ ನಿಯಂತ್ರಕನಾಗಿ ಮಾತ್ರ ಕಾರ್ಯ ನಿರ್ವಹಿಸಿವುದು ಸಾಧ್ಯವಾಯಿತು. ಕೊನೆಯ ವರ್ಷಗಳಲ್ಲಿ ಈತ ವಿಷರೋಧಕ ಲಸಿಕೆಗಳನ್ನು ತಯಾರಿಸುವ ಪ್ರಯೋಗಗಳಲ್ಲಿ ನಿರತನಾದ. ಕ್ಷಯದ ಕ್ರಿಮಿಗಳನ್ನು ಎದುರಿಸುವ ಲಸಿಕೆಗಳನ್ನು ಕರುಗಳಲ್ಲಿ ಉಪಯೋಗಿಸಿ ಸೋಂಕು ವಿರುದ್ಧ ರಕ್ಷಣೆಯನ್ನು ನೀಡುವ ಲಸಿಕೆಗಳನ್ನು ತಯಾರಿಸಿದ. ಇವನ್ನು ರಷ್ಯ, ಸ್ವೀಡನ್ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಉಪಯೋಗಿಸಿದರು. ಆದರೆ ಇವುಗಳ ಗುಣಾವಗುಣಗಳನ್ನು ತಿಳಿದು ತಿದ್ದಿಸರಿಪಡಿಸುವ ತನಕ ಈತ ಉಳಿದಿರಲಿಲ್ಲ.         			
(ಎಸ್.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ